ಸಕ್ಕರೆ ಬಿಸ್ಕತ್

೧೯೯೦ರ ನೆನಪುಗಳ ಮೆಲಕು ಹಾಕುತ್ತಾ ಮತ್ತೆ ಬಂದೆ. ಅಪ್ಪನ ಕೆಲಸ ದೂರದ ಊರಿನಲ್ಲಾದ್ದರಿಂದ
ಸಂಬಂಧಿಕರು ನಮ್ಮ ಮನೆಗೆ ಬಂದಿದ್ದು ವಿರಳ. ನನ್ನ ಪ್ರಪಂಚವೆಂದರೆ ಅಪ್ಪ ಅಮ್ಮ ಸ್ನೇಹಿತರು
ಅಷ್ಟೆ. ರಜೆಯಲ್ಲಿ ಮಾತ್ರ ಸಂಬಧಿಕರೊಂದಿಗೆ ಹಿಗ್ಗುತ್ತಿದ್ದೆ. ಅಧೃಶವಶಾತ್ ದೊಡ್ಡಪ್ಪನಿಗೆ ನಾವಿದ್ದ
ತಾಲ್ಲೂಕಿನ ಸಮೀಪದ ಊರಿಗೆ ವರ್ಗಾವಣೆ ಆಯಿತು. ಮಕ್ಕಳು ಹಾಗು ದೊಡ್ಡಮ್ಮ ಹಳ್ಳಿಯಲ್ಲೇ
ಇದ್ದರು ಇವರೊಬ್ಬರೆ ಬೇರೆ ಬೇರೆ ಊರುಗಳಲ್ಲಿ ಕೆಲಸದ ನಿಮಿತ್ತ ಇರಬೇಕಾರ ಪರಿಸ್ಥಿತಿ.  

ವೃತ್ತಿಯಲ್ಲಿ ಪಶುವೈದ್ಯ. ಆಗಿನ ಕಾಲಕ್ಕೆ  ಸರ್ಕಾರದ ಗೌರವಾನ್ವಿತ ಹುದ್ದೆ, ಆದರೆ ಅತಿ ಸರಳ ವ್ಯಕ್ತಿ.
ಎಳ್ಳಷ್ಟೂ ಅಹಂಕಾರವಿರಲಿಲ್ಲ. ಹಳ್ಳಿಯಲ್ಲೇ ಹುಟ್ಟಿ ಬೆಳೆದವರು ಪ್ರಕೃತಿಯನ್ನು ಅಪಾರವಾಗಿ
ಪ್ರೀತಿಸುತ್ತಿದ್ದರು. ವೃತ್ತಿಯ ಜೊತೆ ಜೊತೆಗೆ ತಮ್ಮ ಜಮೀನಿನಲ್ಲಿ ಕೃಷಿಯನ್ನು ಮುಂದುವರೆಸಿಕೊಂಡು
ಹೋಗುತ್ತಿದ್ದರು. ವೃತ್ತಿಯಲ್ಲೂ ಪ್ರಕೃತಿಯ ಮಡಿಲೇ! ದನ, ಕರು, ಎತ್ತು ಯಮ್ಮೆ ಇವುಗಳ ಜೊತೆಯೇ ವೃತ್ತಿ.

ನನ್ನ ಜೊತೆಯಿದ್ದಾಗಲೂ ಪ್ರಕೃತಿಯ ಪಾಠಗಳೇ :-) ಆಗಿನ ಕಾಲಕ್ಕೆ ಅವರಿಗೆ ವರ್ಷದ ಎಲ್ಲಾ ಮಳೆಗಳ
ಬಗ್ಗೆ ಅರಿವಿತ್ತು. ಹಸ್ತ ಮಳೆ, ಸ್ವಾತಿ ಮಳೆ ಇತ್ಯಾದಿ. ಯಾವ ಹವಾಮಾನ ಇಲಾಖೆಯ ವರದಿಯು ಬೇಕಾಗಿರಲಿಲ್ಲ,
ತಲೆ ಎತ್ತಿ ಆಕಾಶ ನೋಡಿದರೆ ಸಾಕು ಇಂದು ಮಳೆ ಅಥವಾ ಇಲ್ಲ ಎಂದು ಕರಾರುವಾಕ್ಕಾಗಿ ಹೇಳುತ್ತಿದ್ದರು.
ಪಶು ವೈದ್ಯ ವೃತ್ತಿಯ ಜೊತೆಗೆ ಪ್ರಗತಿಪರ ರೈತ. ಸಮಯ ಸಿಕ್ಕಾಗಲೆಲ್ಲ ತೋಟ, ಗದ್ದೆಯ ಕಡೆ ಸವಾರಿ.
ಅವರಿಗೆ ಸಂತೋಷ ಕೊಡುತ್ತಿದ್ದು ಅದೇ, ತೆಂಗಿನ ಮರ ಕಾಯಿ ಬಿಟ್ಟಾಗ, ಹಸು ಕರು ಹಾಕಿದಾಗ, ನಾಟಿ
ಆದಮೇಲೆ ಭತ್ತದ ಪೈರು ತಲೆ ಎತ್ತಿ ನಿಂತಾಗ. ಪ್ರಕೃತಿಯಲ್ಲಿ ಬೆರೆತವರು ಪ್ರಕೃತಿಯನ್ನು ಅರಿವರು ಅಲ್ಲವೇ?

ಅವರು ಕೆಲಸ ಮಾಡುತ್ತಿದ್ದ ಊರು ನಮ್ಮ ಮನೆ ಇಂದ ಸುಮಾರು ೮೦ ಕಿಮೀ ದೂರದಲ್ಲಿತ್ತು.  ನಮ್ಮ ಮನೆಗೆ
ಎರಡು ವಾರಕ್ಕೊಮ್ಮೆ ಬರುತ್ತಿದ್ದರು. ಯಾವತ್ತೂ ಬರಿಗೈಲಿ ಬಂದಿರಲಿಲ್ಲ. ನನ್ನಮ್ಮ ಅವರ ಪ್ರೀತಿಯ ತಂಗಿಯ
ಮಗಳು, ನಾನು ಅವರ ಮಾತಿನ ಮಲ್ಲ. ಅಪ್ಪ ಅಮ್ಮನಿಗೆ ಹಣ್ಣು ಹಂಪಲು ನನಗೆ ನನ್ನ ನೆಚ್ಚಿನ ಸಕ್ಕರೆ ಬಿಸ್ಕತ್
ಪೊಟ್ಟಣ. ಹತ್ತಾರು ಬಿಸ್ಕತ್ಗಳು ಇರುತ್ತಿದ್ದವು, ಪ್ರತಿದಿನ ಎರಡು ತಿಂದರೂ ಮತ್ತೆ ದೊಡ್ಡಪ್ಪ ಬರುವ ವರೆಗೂ
ತಿನ್ನಬಹುದು, ಇದು ಒಬ್ಬ ಮುಗ್ಧ ಬಾಲಕನ ಸ್ವಾರ್ಥ ಆಲೋಚನೆ :-). 

ನಮ್ಮ ವಠಾರದಲ್ಲಿ ನನ್ನ ವಯಸ್ಸಿನ ಐದಾರು ಮಕ್ಕಳಿದ್ದರು. ದೊಡ್ಡಪ್ಪ ಕೊಟ್ಟ ಬಿಸ್ಕತ್ ಕೈಯಲ್ಲಿತ್ತು. ಅವಕ್ಕೂ
ಅದನ್ನು ಸವಿಯುವ ಆಸೆ. ದೊಡ್ಡಪ್ಪ ಇದನ್ನು ಗಮನಿಸಿದರು. ಅವರೇ ಕೊಡಬಹುದಿತ್ತು. ನನಗೆ ಬುದ್ಧಿ ಬರಲೆಂದು
ನನ್ನನ್ನು ಕರೆದು, ಮೊದಲು ಅವರಿಗೆ ಕೊಡು ಆಮೇಲೆ ನೀ ತಿನ್ನು, ಹಂಚಿಬಿಡು ಮಗು ಅಂದರು. ಕೊಟ್ಟ ಕ್ಷಣಕ್ಕೆ
ನನ್ನೆಲ್ಲ ಸ್ನೇಹಿತರ ಮುಖದಲ್ಲಿ ಖುಷಿ. ಅದನ್ನು ಕಂಡು ನನಗೆ ಬಿಸ್ಕತ್ ರುಚಿ ಇನ್ನು ಸಿಹಿ ಅನಿಸಿತು. ಒಂದು ಪುಟ್ಟ
ಹುಡುಗನಿಗೆ ಮರೆಯಲಾರದ ಅನುಭವ, ದೊಡ್ಡಪ್ಪ ಹೇಳಿಕೊಟ್ಟ ಪಾಠ. ಹಂಚಿ ತಿಂದರೆ ಊಟ, ಕೂಡಿ ಬಾಳಿದರೆ
ಬದುಕು, ಸ್ವಾರ್ಥವಿಲ್ಲದ ಸಂಬಂಧ ಪ್ರಕೃತಿಯ ಪ್ರತಿಬಿಂಬ.

ಮತ್ತೊಂದು ಅನುಭವದ ಜೊತೆ ಪುನಃ  ಭೇಟಿಯಾಗೋಣ?!

Comments

Popular posts from this blog

ಹಾಲು ಮೊಸರು ಬೆಣ್ಣೆ ತುಪ್ಪ

ಎಡಗೈ ಹಸ್ತಾಕ್ಷರ