ಹಾಲು ಮೊಸರು ಬೆಣ್ಣೆ ತುಪ್ಪ

ಮತ್ತೊಂದು ನೆನಪು ಮತ್ತೊಮ್ಮೆ ಬಂದೆ. ಅದೇ ೧೯೯೦ ರ ಕಾಲ. ಶಾಲೆಯ ವೇಳೆ ಶಿಕ್ಷಕರ
ಶಿಸ್ತು ರಜೆಯಲ್ಲಿ ಅಜ್ಜನ ಗ್ರಾಮರ್ ಕಸರತ್ತು. ನನಗೋ ಬೆಳಿಗ್ಗೆಯಿಂದ ಸಂಜೆಯವರೆಗೂ
ಆಡುವ ಆಸೆ, ಹಾರಾಡುವ ಆಸೆ, ನಾನೆಲ್ಲಿ ಹೋಗಲಿ? ಇತ್ತು ಮತ್ತೊಂದು ಸ್ವರ್ಗ.  ಅದೇ ನನ್ನ
ದೊಡ್ಡಮ್ಮನ ಹಳ್ಳಿಯ ಮನೆ! ತಾತನ ಮನೆಯಿಂದ ೫ ಕಿ.ಮೀ . ದೂರದಲ್ಲಿತ್ತು. ಇಂದಿನ
ಮೆಟ್ರೋ ಪ್ರಯಾಣಿಕರಿಗೆ ಅದೇನು ಮಹಾ ಆದರೆ ಆಗ ಅದೇ ದೂರ ಅದೇ ಒಂದು ಪ್ರಯಾಣ.

ದೊಡ್ಡಮ್ಮನ ಮಗ ಅಜ್ಜನ ಮನೆಯಲ್ಲೇ ವ್ಯಾಸಂಗ ಮಾಡುತ್ತಿದ್ದ.
ರಜೆಗೆ ಮನೆಗೆ ಹೋಗುವಾಗ ನನ್ನನ್ನು ಅವನ ಸೈಕಲ್ ಹಿಂದಿನ ಸೀಟಿನ ಮೇಲೆ ಕೂರಿಸಿ
ಕರೆದುಕೊಂಡು ಹೋಗುತ್ತಿದ್ದ. ದಾರಿಯುದ್ದಕ್ಕೂ ಗದ್ದೆಗಳ ಹಸಿರು, ದೊಡ್ಡ ಕೆರೆಯ ನೀರು,
ಮಧ್ಯ ಚಿಕ್ಕ ಪುಟ್ಟ ಊರು, ಹಗುರಾಗುತ್ತಿತ್ತು ಉಸಿರು.

ನಮ್ಮ ಸೈಕಲ್ ಕಂಡ ತಕ್ಷಣ ದೊಡ್ಡಮ್ಮನಿಗೆ ಹಿಗ್ಗೋ ಹಿಗ್ಗು. ಅವರ ಕಿರೀ ಮಗನ ಜೊತೆ ತಂಗಿಯ
ಮಗ ಬಂದದ್ದು ಅವರಿಗೆ ಎಲ್ಲಿಲ್ಲದ ಸಂತೋಷ. ಹೋದ ತಕ್ಷಣ ಕೈ ಕಾಲು ತೊಳೆದರೆ ಅವರೇ ಖುದ್ದಾಗಿ ಕರೆದು
ತಂದ ಹಾಲಿಗೆ ಸಕ್ಕರೆ, ಆಹ್ ಅದರ ಸ್ವಾದ ಕುಡಿದವರಿಗೆ ಮಾತ್ರ ಗೊತ್ತು. ಕಾಲ ಕಾಲಕ್ಕೆ ಊಟ, ತಿಂಡಿ, ಹಾಲು
ನಿದ್ದೆ, ಆಡಲು ಹಳ್ಳಿಯ ಗೆಳೆಯರ ಬಳಗ. ಗೋಲಿ ಗೆದ್ದಷ್ಟು, ಗುನ್ನ ಹೊಡೆದಷ್ಟು, ಕಳ್ಳರನ್ನು ಹಿಡಿಯಲು ಪೊಲೀಸ್,
ಪೋಲೀಸರ ಕಣ್ಣು ತಪ್ಪಿಸುವ ಕಳ್ಳರು, ಚಿನ್ನಿ ದಾಂಡು ಅಳೆದಷ್ಟು. ಅದಕ್ಕೆ ಸ್ವರ್ಗ ಅಂತ ಕರೆದದ್ದು. 

ಅವರಿಗೇ ೫ ಮಕ್ಕಳು ಸಾಲದ್ದಕ್ಕೆ ನಾನು ಒಬ್ಬ ಜೊತೆಗೆ ಇನ್ನೊಂದಷ್ಟು ಪಕ್ಕದ ಮನೆಯ ಮಕ್ಕಳು, ವಯಸ್ಸಾದ
ಅಜ್ಜಿಯರು ಅಜ್ಜಂದಿರು! ಇಷ್ಟೂ ಜನಕ್ಕೆ ಆಕೆಯ ಅಡುಗೆ. ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟಿದ್ದರು,
ಪಕ್ಕದ ಕೊಟ್ಟಿಗೆಯಲ್ಲಿ ಹಾಲು ಕರೆಯಬೇಕು ಇವೆಲ್ಲದರ ನಡುವೆ ಅವರಿಗೆ ಸಂಬಂಧಗಳ ಸಂಭ್ರಮ :-)
ವಿಭಕ್ತ ಕುಟುಂಬದವರಿಗೆ ಕಲ್ಪನೆಗೆ ಮೀರಿದ ಮಾತು!

ಕೊಟ್ಟಿಗೆಯಲ್ಲಿ ಹಾಲು ಕರೆಯುವಾಗ ನಾನೂ ಹೋಗುತ್ತಿದ್ದೆ. ನನ್ನದು ಮತ್ತದೇ ಕುತೂಹಲದ ಪ್ರಶ್ನೆಗಳು. ಮೊಸರು
ಹೇಗ್ ಆಗತ್ತೆ? ತುಪ್ಪ ಹೆಂಗ್ ಬರತ್ತೆ? ಅವರಿಂದಲೇ ಕಲಿತದ್ದು. ಹಾಲು ಕರೆದು ಕುಡಿದರೆ ಶಕ್ತಿ ಹೆಪ್ಪಾಕಿದರೆ ಮೊಸರು,
ಮೊಸರು ಅನ್ನಕ್ಕೆ ತಿಂಡಿಗೆ ಎಲ್ಲಕ್ಕೂ ಸೈ, ಮೊಸರನ್ನು ಕಡೆದರೆ ಮಜ್ಜಿಗೆ, ಕುಡಿದರೆ ತಂಪು ಮತ್ತೆ ಬೆಣ್ಣೆಯ ಸವಿಯಬಹುದು,
ಅದನ್ನು ಕಾಯಿಸಿದರೆ ತುಪ್ಪ ಆಹಾ ಏನು ಸ್ವಾದ!

ಅವರ ಹಾಗು ಆಗಿನ ಕಾಲದ ಹೆಣ್ಣು ಮಕ್ಕಳ  ಜೀವನವು ಹಾಗೆ ಅಲ್ಲವೇ? ಹುಟ್ಟಿದಾಗ ಮಗು ಎಲ್ಲರ ಮುಗುಳ್ನಗೆಯ ಕಾರಣ,
ಬೆಳೆಯುತ್ತ ಪ್ರೀತಿಯ ಅಕ್ಕ, ನಲ್ಮೆಯ ತಂಗಿ ಆಗುತ್ತಾರೆ, ಇನ್ನು ಬೆಳೆದು ತಾಯಿ/ಚಿಕ್ಕಮ್ಮ/ದೊಡ್ಡಮ್ಮ/ಅತ್ತಿಗೆ ಇನ್ನಷ್ಟು ಪ್ರೀತಿ,
ಬದುಕನ್ನು ಸವಿಸಿ ಮತ್ತೆ ಅಜ್ಜಿಯ ಪಾತ್ರ, ಜವಾಬ್ದಾರಿಗಳು ಹೆಚ್ಚುತ್ತವೆ ಆದರೆ ಪ್ರೀತಿ ದ್ವಿಗುಣ, ಅನುಭವದ ಗಂಧ!
ಸಂಬಂಧಗಳ ನೂಲಲ್ಲೇ ಬದುಕನ್ನು ಹೆಣೆದವರು.  ಒಂದೇ ಜೀವ ಹತ್ತು ಹಲವು ಭಾವ.

ಮತ್ತೊಮ್ಮೆ ಸಿಗೋಣ?!

Comments

Popular posts from this blog

ಎಡಗೈ ಹಸ್ತಾಕ್ಷರ

ಸಕ್ಕರೆ ಬಿಸ್ಕತ್