ಎರಡು ತೈರ್ ವಡೆ ಒನ್ ಬೈ ಟು ರಾಗಿ ಮಾಲ್ಟ್

ನನ್ನ ಅಪ್ಪನ ಬ್ಯಾಂಕ್ ವರ್ಗಾವಣೆಗಳಿಂದ, ಅಜ್ಜಿ ತಾತನನ್ನು ನೋಡಲು ಅವಕಾಶವಾಗುತ್ತಿದ್ದದ್ದು ಬೇಸಿಗೆ
ಹಾಗು ದಸರಾ ರಜೆಯಲ್ಲಿ ಮಾತ್ರ. ಅಜ್ಜಿ ಮುಗ್ಧತೆಯ ಮೂರ್ತಿ, ತಾಯಿಯೇ ದೇವರು ಅನ್ನುತ್ತೇವೆ ಇನ್ನು
ಅವರು ನನ್ನ ತಾಯಿಯ ತಾಯಿ! ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತ ನೀವೇ ಊಹಿಸಿಕೊಳ್ಳಿ. 

ಅಜ್ಜ ದಕ್ಷ ಹಾಗು ಪ್ರಾಮಾಣಿಕ ಶಿಕ್ಷಕ, ವೃತ್ತಿಯಲ್ಲಿನ ಶಿಸ್ತು ಪ್ರಾಮಾಣಿಕತೆಯ ಗತ್ತು ಎರಡೂ ಕೂಡ
ನಿವೃತ್ತಿಯಾದ ನಂತರವೂ ಜೀವನದಲ್ಲಿ ಹಾಗೆ ಇತ್ತು. ನನಗೆ ಬುದ್ಧಿ ತಿಳಿದಾಗಲಿಂದಲೂ ನೋಡಿದ್ದೇ,
ಎಲ್ಲರಿಗು ಅವರನ್ನು ಕಂಡರೆ ಒಂದು ತರಹ ಭಯ, ಗೌರವದಿಂದ ಬರುವ ಸ್ವಾಭಾವಿಕ ಭಯ/ಭಕ್ತಿ ಅಂದುಕೊಳ್ಳಿ.
೧೯೯೦-೧೯೯೫ಕಾಲದ ಕಥೆ ಇದು. ನಾನು ಪ್ರಾಥಮಿಕ ಶಾಲೆಗೆ ಹೋಗೊತ್ತಿದ್ದ ಕಾಲ. ಬೇಸಿಗೆ/ದಸರಾ ರಜೆ ಅಂದರೆ
ಮೊದಲು ತಲೆಗೆ ಹೊಳೆಯುತ್ತಿದುದೇ ಅಜ್ಜಿಯ ಪ್ರೀತಿಯ ೫೦ ಪೈಸೆ ಐಸ್ ಕ್ರೀಮ್ ಹಾಗು ಆಕೆ ಉಣಬಣಿಸುತ್ತಿದ್ದ
ಬೇಳೆ ಸಾರು ಅನ್ನ.  ಅದೆ ಸಮಯಕ್ಕೆ ಅಜ್ಜನ ಶಿಸ್ತು ಕಾಡುತಿತ್ತು!

"Holiday Homework" ಮುಗಿಸಿದ ಮೇಲು ಅವರ ಇಂಗ್ಲಿಷ್ ಗ್ರಾಮರ್ ಪಾಠ ೨ ಗಂಟೆ ಕುಳಿತರೆ ಮಾತ್ರ ಆಡಲು
ಅವಕಾಶ ಇಲ್ಲದಿದ್ದರೆ ಇಲ್ಲ. ಮಗಳ ಒಬ್ಬನೆ  ಮಗ ಮುದ್ದಿನಲ್ಲಿ ಹಾಳಾಗಬಹುದು ಎಂದು ತಾತನ ಲೆಕ್ಕಾಚಾರ.
ಆಗ ತಿಳಿಯದ್ದು ಈಗ ಎಲ್ಲವು ಅರ್ಥವಾಗುತ್ತದೆ :-). ಅಜ್ಜಿಯ ಮುದ್ದು ತಾತನ ಗುದ್ದು ಎರಡರ ನಡುವೆ ಬಾಲ್ಯ
ಹಿತವಾಗಿತ್ತು. ಶಿಸ್ತಿನ ನಡುವೆ ತಾತನಿಗೂ ಆಗೊಮ್ಮೆ ಈಗೊಮ್ಮೆ ಅಕ್ಕರೆಯ ಮೊಮ್ಮಗನ ಮೇಲೆ ಮುದ್ದು. 
ಅವರದ್ದು ಒಂದು ತರಹದ ವಾಡಿಕೆ ಅಂತಲೇ ಅಂದುಕೊಳ್ಳಿ. ಮಾಸಿಕ ಪಿಂಚಣಿಯ ದಿನದಂದು ಆಗಿನ
ಕಾಲಕ್ಕೆ ಎ ಟಿ ಮ್ ಇರಲಿಲ್ಲ ಹಾಗಾಗಿ ಬ್ಯಾಂಕಿಗೆ ಹೋಗಿ ದುಡ್ಡು ತರಬೇಕಿತ್ತು. ನನ್ನನ್ನೂ ಅವರ ಜೊತೆ
ಬ್ಯಾಂಕಿಗೆ ಕರೆದೊಯ್ಯುತ್ತಿದ್ದರು. ದುಡ್ಡು ಕೈಗೆ ಬಂದ ತಕ್ಷಣ ನಾವಿಬ್ಬರು ಮೊದಲು ಹೋಗುತ್ತಿದ್ದ ಜಾಗ
"ಶೆಟ್ಟಿ ಹೋಟೆಲ್". ಹೋದ ತಕ್ಷಣ ಹೇಳುತ್ತಿದ್ದ order:

"ಎರಡು ತೈರ್ ವಡೆ ಒನ್ ಬೈ ಟು ರಾಗಿ ಮಾಲ್ಟ್"

ಮೊಮ್ಮಗನಿಗೆ ಮಾಸಿಕ ಪಿಂಚಣಿಯ ಟ್ರೀಟ್ ಅಥವಾ ಪಾರ್ಟಿ ಅದು! ಇಂದು ತಿನ್ನುವ ಯಾವ ಪಿಜ್ಜಾ
ಪಾಸ್ತಾಗಳಲ್ಲೂ ಆ ರುಚಿಯಿಲ್ಲ. ಅಜ್ಜನ ಪ್ರಾಮಾಣಿಕ ದುಡಿಮೆಯ ರುಚಿ, ಒಂದು ತಿಂಗಳು ಪೂರ್ತಿ
ಅದಕ್ಕೆ ಕಾದಿರುವ ಸವಿ, ಸಿಟ್ಟಿನಲ್ಲೂ ಅಕ್ಕರೆ ತೋರುತ್ತಿದ್ದ ಪ್ರೀತಿಯ ಪರಿ :-) ಇಂದಿಗೆ ಎರಡು ವರ್ಷಗಳಾಯ್ತು
ಅವರು ಇಹಲೋಕ ತ್ಯಜಿಸಿ. ಮನುಷ್ಯನ ದೇಹ ಸಾಯುವುದಷ್ಟೇ ನೆನಪುಗಳು  ಎಂದಿಗೂ ಜೀವಂತ. ಬದುಕಿದ ರೀತಿ
ಆದರ್ಶಗಳು ಚಿರಂತನ.

Comments

Popular posts from this blog

ಹಾಲು ಮೊಸರು ಬೆಣ್ಣೆ ತುಪ್ಪ

ಎಡಗೈ ಹಸ್ತಾಕ್ಷರ

ಸಕ್ಕರೆ ಬಿಸ್ಕತ್